ಕ್ರಿಸ್ಮಸ್ 

	ಕ್ರಿಸ್ತನ ಜನನ ದಿನ ಡಿಸೆಂಬರ್ 25 ಎಂಬ ಸಾಂಪ್ರದಾಯಿಕ ನಂಬಿಕೆಯಂತೆ ಅಂದು ಎಲ್ಲ ದೇಶಗಳ ಕ್ರೈಸ್ತ ಮತೀಯರು ಆಚರಿಸುವ ಕ್ರಿಸ್ತನ ಜನ್ಮದಿನೋತ್ಸವ. ಕ್ರಿಸ್‍ಮಸ್ ಎಂಬುದು ಕ್ರೈಸ್ಟ್ಸ್ ಮಾಸ್ (ಎಂದರೆ ಕ್ರಿಸ್ತನಿಗೆ ಸಂಬಂಧಿಸಿದ ಆರಾಧನೆ, ಹಬ್ಬ) ಎಂಬುದರ ಸಂಕ್ಷಿಪ್ತರೂಪ. ಕ್ರಿ.ಶ. ನಾಲ್ಕನೆಯ ಶತಮಾನದ ಉತ್ತರಾರ್ಧದಿಂದ ಈ ಉತ್ಸವ ಅಸ್ತಿತ್ವಕ್ಕೆ ಬಂದಿದೆ ಎನ್ನಲಾಗಿದೆ. ರೋಮನ್ ಕೆಥೊಲಿಕರು ಜನವರಿ 6ರಂದು ಆಚರಿಸುತ್ತಿದ್ದ ಸೂರ್ಯನ ಹಬ್ಬವಾದ ಎಪಿಫೆನಿಯೂ ಕ್ರಿಸ್ತನ ಜನನವನ್ನು ಸ್ಮರಣೆಗೆ ತರುವಂಥ ಹಬ್ಬವಾಗಿತ್ತು. ಈ ಹಬ್ಬವನ್ನು ಆಚರಿಸಲಿಕ್ಕೆ ಪೌರಸ್ತ್ಯರು ಒಂದು ತಾರೀಖನ್ನೂ ಪಾಶ್ಚಾತ್ಯರು ಒಂದು ತಾರೀಖನ್ನೂ ಗೊತ್ತು ಮಾಡಿದುದರಿಂದ ಎರಡು ಭಿನ್ನ ದಿನಗಳಲ್ಲಿ ಈ ಹಬ್ಬವನ್ನು ಆಚರಿಸುವಂತಾಯಿತು. ಆದರಿದು ಕ್ರಮೇಣ ಡಿಸೆಂಬರ್ 25ರಂದೇ ಎಲ್ಲ ದೇಶಗಳಲ್ಲೂ ಆಚರಣೆಗೆ ಬಂತು.

	ಕ್ರಿಸ್ತ ಹುಟ್ಟಿದ ತಾರೀಖಿನ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ಕ್ರಿ.ಶ. 336ಕ್ಕಿಂತ ಮುಂಚೆ ರೋಮಿನ ಕ್ರೈಸ್ತೇತರರು (ಪೇಗನ್ಸ್) ಡಿಸೆಂಬರ್ 25ರಂದು ಸೂರ್ಯನ ಹಬ್ಬವನ್ನು ಆಚರಿಸುತ್ತಿದ್ದರು. ಅದೇ ದಿನವನ್ನು ಕ್ರಿಸ್ಮಸ್ ಹಬ್ಬವನ್ನಾಗಿ ಗೊತ್ತುಮಾಡಿರಬಹುದೆಂದು ಇನ್ನೊಂದು ಊಹೆ.

	ಆ ದಿನ ಚರ್ಚ್‍ಗಳಲ್ಲಿ ಮೂರು ಆರಾಧನೆಗಳು ನಡೆಯುತ್ತವೆ. ಮೊದಲನೆಯದು ರಾತ್ರಿ 12 ಗಂಟೆಗೂ ಎರಡನೆಯದು ಬೆಳಗ್ಗೆಯೂ ನಡೆಯುತ್ತವೆ. ಜನ ಚರ್ಚುಗಳಲ್ಲಿ ಕ್ರಿಸ್ಮಸ್ ಹಬ್ಬದ ಕೀರ್ತನೆಗಳನ್ನು (ಕರೋಲ್ಸ್) ಹಾಡಿಕೊಂಡು ನಲಿಯುತ್ತಾರೆ. ಸಾಮಾನ್ಯವಾಗಿ ಈ ಹಬ್ಬದ ಉತ್ಸಾಹವನ್ನು ಹೊಸ ವರ್ಷದ ಮೊದಲ ದಿನದವರೆಗೂ ಅಂದರೆ ಜನವರಿ ಒಂದರವರೆಗೂ ಕಾಣಬಹುದಾಗಿದೆ.

	ಈ ಹಬ್ಬಕ್ಕೆ ಸಂಬಂಧಿಸಿದಂತೆ ಅನೇಕ ರೀತಿಯ ಪದ್ಧತಿಗಳು ರೂಢಿಗೆ ಬಂದಿವೆ. ಆ ದಿನ ಪ್ರತಿಯೊಬ್ಬರೂ ತಮ್ಮ ತಮ್ಮ ಗೃಹಗಳನ್ನು ಮನಮೆಚ್ಚುವಂತೆ ಅಲಂಕರಿಸುತ್ತಾರೆ. ಅಂದು ಸ್ತ್ರೀಪುರುಷ ಮಕ್ಕಳಾದಿಯಾಗಿ ಶುಭ್ರವಸ್ತ್ರಧಾರಿಗಳಾಗಿ ಚರ್ಚಿಗೆ ಹೋಗಿ ಕರ್ತನಿಗೆ ಪ್ರಾರ್ಥನೆಯನ್ನು ಸಲ್ಲಿಸಿ ಬಂದು, ಭಕ್ಷ್ಯ ಭೋಜ್ಯ ತಿಂಡಿ ತಿನಿಸುಗಳನ್ನು ತಿಂದುಂಡು ಸಂತೋಷವಾಗಿರುತ್ತಾರೆ. ಆ ದಿನ ಬಡ ಬಗ್ಗರಿಗೆ ಅನ್ನ ವಸ್ತ್ರಾದಿಗಳನ್ನು ದಾನ ಮಾಡುವುದು ರೂಢಿಯಲ್ಲಿದೆ. ಉಳ್ಳವರು ಈ ದಿನದಂದು ತಮ್ಮ ಪ್ರೀತಿ ಪಾತ್ರರಿಗೆ ಬೆಲೆ ಬಾಳುವ ಪದಾರ್ಥಗಳನ್ನು ಉಡುಗೊರೆಯಾಗಿ ಕೊಡುತ್ತಾರೆ. ಅಂದು ದೂರದಲ್ಲಿರುವ ತಮ್ಮ ಆಪ್ತರು ಆತ್ಮೀಯರಿಗೆ ಶುಭಾಕಾಂಕ್ಷೆ ಪತ್ರಗಳನ್ನು ಬರೆದು ಶುಭ ಕೋರುವುದು ಸರ್ವೇಸಾಮಾನ್ಯವಾಗಿದೆ. ಕ್ರಿಸ್‍ಮಸ್ ಗಿಡವನ್ನು ನಿರ್ಮಿಸಿ ಅದನ್ನು ಕಾಗದದ ಹೂ ಮತ್ತು ದೀಪಗಳಿಂದ ಅಲಂಕರಿಸುವ ಪದ್ಧತಿ ಜರ್ಮನರಿಂದ ಬಂದಿತೆನ್ನಲಾಗಿದೆ. ನ್ಯೂಯಾರ್ಕಿನಲ್ಲಿ ಮೊದಲು ರೂಢಿಗೆ ಬಂದ ಸಾಂತ ಕ್ಲಾಸನ ಕಲ್ಪನೆಗೆ ಕಾರಣವಾದ್ದು ಅಲ್ಲಿಯ ಡಚ್‍ಸಂಪ್ರದಾಯಗಳು ಎಂದು ಹೇಳಲಾಗಿದೆ.

	(ನೋಡಿ- ನಿಕಲಸ್,-ಸಂತ)								(ಡಿ.ವಿ.ಡಬ್ಲ್ಯು.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ